ಕರುಹಾಲೆ: ಅಲ್ಮೇಸೀ ಕುಟುಂಬಕ್ಕೆ ಸೇರಿದ ಸಣ್ಣಗಾತ್ರದ ಮರ. ಇದರ ಶಾಸ್ತ್ರೀಯನಾಮ ಟ್ರೀಮ ಓರಿಯಂಟ್ಯಾಲಿಸ್. ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳ ತೇವಮಯ ಹಾಗೂ ಒಣಹವೆಯ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಪರ್ಯಾಯವಾಗಿ ಜೋಡಣೆಗೊಂಡಿರುವ ಹಾಗೂ ಗರಗಸದ ಹಲ್ಲಿನಂಥ ಅಂಚುಳ್ಳ ಎಲೆಗಳಿವೆ. ಎಲೆಗಳ ಬುಡ ಕೊಂಚ ಅಸಮವಾಗಿದೆ. ಎಲೆಯ ಅಲಗಿನ ಬುಡಭಾಗದಲ್ಲಿ ಪ್ರಮುಖವಾದ ಮೂರು ನಾಳಗಳಿವೆ. ಹೂಗೊಂಚಲು ಮಧ್ಯಾರಂಭಿ ಮಾದರಿಯದು; ಎಲೆಗಳ ಕಂಕುಳಲ್ಲಿ ಹುಟ್ಟುತ್ತದೆ. ಹೂಗಳು ಏಕಲಿಂಗಿಗಳು; ಹೆಣ್ಣು ಗಂಡು ಹೂಗಳು ಒಂದೇ ಮರದಲ್ಲಿರಬಹುದು ಅಥವಾ ಬೇರೆ ಬೇರೆ ಮರಗಳಲ್ಲಿರಬಹುದು. ಪುಷ್ಟಪತ್ರಗಳು ಹೂದಳಗಳು ಬೇರೆ ಬೇರೆಯಾಗಿಲ್ಲ; ಒಂದೇ ಬಗೆಯ ಪೆರಿಯಾಂತುಗಳಾಗಿ ರೂಪಿತವಾಗಿವೆ. ಇವುಗಳ ಸಂಖ್ಯೆ 4-5. ನೋಡಲು ಪುಷ್ಟಪತ್ರಗಳಂತಿವೆ. ಇವು ಗಂಡುಹೂಗಳಲ್ಲಿ ಬಹಳ ಪುಟ್ಟಗಾತ್ರದವಾಗಿವೆ. ಗಂಡುಹೂಗಳಲ್ಲಿ 4-5 ಕೇಸರಗಳೂ ಒಂದು ಬರಡು ಅಂಡಾಶಯವೂ (ಪಿಸ್ಪಿಲೋಡ್) ಇವೆ. ಹೆಣ್ಣುಹೂವಿನಲ್ಲಿ ಎರಡು ಕಾರ್ಪೆಲುಗಳಿಂದಾದ ಉಚ್ಚ ಸ್ಥಾನದ ಅಂಡಾಶಯವಿದೆ. ಶಲಾಕೆ ಎರಡು ಭಾಗವಾಗಿ ಕವಲೊಡೆದಿದೆ. ಅಂಡಕೋಶದಲ್ಲಿ ಒಂದೇ ಕೋಣೆಯೂ ಅದರೊಳಗೆ ಒಂದೇ ಅಂಡಕವೂ ಇವೆ. ಕಾಯಿ ಒಂದೇ ಬೀಜವನ್ನುಳ್ಳ ಅಷ್ಟಿಫಲ ಮಾದರಿಯದು.
ಕರುಹಾಲೆ ಮರದ ಚೌಬೀನೆ ಕೆಂಪು ಮಿಶ್ರಿತ ಬೂದುಬಣ್ಣದ್ದಾಗಿದ್ದು ಬಹಳ ನಯವಾಗಿದೆ. ಬಂದೂಕಿನ ಮದ್ದಿನ ತಯಾರಿಕೆಗೆ ಬೇಕಾಗುವಂಥ ಇದ್ದಲನ್ನು ತಯಾರಿಸಲು ಇದು ಉತ್ತಮ ದರ್ಜೆಯ ಮರವೆಂದು ಹೆಸರಾಗಿದೆ. ಕೆಲವೆಡೆ ನೆರಳಿನ ಮರವಾಗಿಯೂ ಬೆಳೆಸುತ್ತಾರೆ.	(ಎ.ಕೆ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ